ಪಠ್ಯ, ನೋಟ್ಸ್‌ನಲ್ಲಿ ವಚನಕಾರ ಹೆಸರು ತಪ್ಪೋ ತಪು ್ಪ
ಶ್ರೀಕಾಂತ ಭಟ್
ಶಿವಮೊಗ್ಗ: ರಾಜ್ಯದ ಪಠ್ಯ ಪುಸ್ತಕ ದೋಷ ವಿಚಾರದಲ್ಲಿ ಉದಾಸೀನ ತೋರುತ್ತಿರುವ ಶಿಕ್ಷಣ ಇಲಾಖೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ದೂರೊಂದು ರಾಜಭವನದ ಮೆಟ್ಟಿಲೇರಿದೆ. ಅಷ್ಟೇ ಅಲ್ಲದೇ, ಶಿಕ್ಷಣ ಇಲಾಖೆಯ ಉದಾಸೀನದಿಂದಾಗಿ ರಾಜ್ಯದ 6 ಲಕ್ಷ ಮಕ್ಕಳು ತಪ್ಪು ಮಾಹಿತಿ ಕಲಿಯುತ್ತಿದ್ದಾರೆ.
ಪರಿಷ್ಕೃತಗೊಂಡ 8ನೇ ತರಗತಿ ಪಠ್ಯ ಪುಸ್ತಕದಲ್ಲಿನ ದೋಷದ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ಪದೇ ಪದೇ ಗಮನಕ್ಕೆ ತಂದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಹಾಗೂ ಮಂತ್ರಿಗಳ ಕ್ರಮವನ್ನು ಪ್ರಶ್ನಿಸಿ, ಶಿವಮೊಗ್ಗ ಜಿಲ್ಲೆ ಈಸೂರು ಗ್ರಾಮದ ಸರ್ಕಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಪಠ್ಯಪುಸ್ತಕದಲ್ಲಿ ತಪ್ಪು ಪ್ರಕಟಗೊಂಡಿದೆ, ಇದರಿಂದ ಶಿಕ್ಷಕರು ತಪ್ಪು ತಪ್ಪು ಹೇಳಿಕೊಡುತ್ತಿದ್ದಾರೆ. ಮಕ್ಕಳೂ ಸಹ ತಪ್ಪು ತಪ್ಪಾಗಿ ಕಲಿಯುತ್ತಿದ್ದಾರೆ. ಇದರಿಂದ ಸುಮಾರು 6 ಲಕ್ಷ ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ದಾಖಲೆ ಸಹಿತವಾಗಿ ಜಯಣ್ಣ ದೂರು ಮುಟ್ಟಿಸಿದ್ದಾರೆ.
ಏನಾಗಿದೆ ತಪ್ಪು? 8ನೇ ತರಗತಿ ಕನ್ನಡ ಭಾಷಾ ಪುಸ್ತಕದ ಪುಟ 102ರಲ್ಲಿನ ಪದ್ಯ ಪಾಠ ಶರಣೆಯರ ವಚನಾಮೃತದಲ್ಲಿ ಮೂರು ವಚನ ಮುದ್ರಿಸಲಾಗಿದೆ. ಒಂದು ವಚನ ಅಕ್ಕಮಹಾದೇವಿಯದಾಗಿದ್ದರೆ, ಎರಡನೇ ವಚನ ಅಮುಗೆ ರಾಯಮ್ಮನವರದ್ದು. ಇವೆರಡೂ ಸರಿಯಾಗೇ ಇದೆ. ಆದರೆ ಮೂರನೇ ವಚನ ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು.... ವಚನವನ್ನು ಆಯ್ದಕ್ಕಿ ಲಕ್ಕಮ್ಮ ಬರೆದಿದ್ದಾರೆ ಎಂದು ತಪ್ಪು ಮುದ್ರಿಸಲಾಗಿದೆ. ಈ ವಚನವನ್ನು ವಾಸ್ತವವಾಗಿ ಬರೆದಿದ್ದು ಆಯ್ದಕ್ಕಿ ಮಾರಯ್ಯ. ಆಯ್ದಕ್ಕಿ ಲಕ್ಕಮ್ಮನವರು ಆಯ್ದಕ್ಕಿ ಮಾರಯ್ಯನ ಪತ್ನಿ.
ಕನ್ನಡ ಪುಸ್ತಕ ಪ್ರಾಧಿಕಾರ ಹೊರತಂದಿರುವ ಸಮಗ್ರ ವಚನ ಸಂಪುಟ 6ರಲ್ಲಿ ಆಯ್ದಕ್ಕಿ ಮಾರಯ್ಯನವರ ವಚನಗಳು (1170) ಪುಟ 369ರ 7ನೇ ವಚನವನ್ನು ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ.
ಗೊಂದಲ: ವಚನ ಪ್ರಕಟಿಸಿದ್ದಷ್ಟೇ ಗೊಂದಲವಾಗಿಲ್ಲ. ಆಯ್ದಕ್ಕಿ ಮಾರಯ್ಯನವರ ವಚನದ ನಾಮಾಂಕಿತ ಅಮರೇಶ್ವರ ಲಿಂಗ. ಆಯ್ದಕ್ಕಿ ಲಕ್ಕಮ್ಮನವರ ವಚನದ ನಾಮಾಂಕಿತ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ ಎಂದಿದೆ. ಹೀಗಾಗಿ ಪಠ್ಯದಲ್ಲಿ ಪ್ರಕಟಗೊಂಡ ವಚನದಲ್ಲಿ ಇರುವ ನಾಮಾಂಕಿತ ಮಾರಯ್ಯನವರದ್ದಾಗಿದ್ದರೆ, ಲಕ್ಕಮ್ಮನವರ ನಾಮಾಂಕಿತ ಬೇರೆಯದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿ ಮುಳುಗುವಂತಾಗಿದೆ.
ಸಹಜವಾಗಿ ಪಠ್ಯ ಪುಸ್ತಕದಲ್ಲಿರುವುದನ್ನು ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಾರೆ. ಮಕ್ಕಳೂ ಅದನ್ನೇ ಕಲಿಯುತ್ತಾರೆ. ಇದೀಗ ಆಗಿರುವುದೂ ಅದೇ. ಶಿಕ್ಷಣ ಇಲಾಖೆಗೆ ಈ ಬಗ್ಗೆ ಗಮನಕ್ಕೆ ತಂದರೂ ಇಲಾಖೆ ಮಾತ್ರ ಗುಮ್ಮನಂತೆ ಕುಳಿತಿದೆ. ಪರಿಣಾಮ ಶಿಕ್ಷಕರಿಂದ ತಪ್ಪು ಬೋಧನೆ ನಡೆಯುತ್ತಿದ್ದರೆ, ಮಕ್ಕಳು ತಪ್ಪು ಮಾಹಿತಿಯನ್ನೇ ಸರಿ ಎಂದು ನಂಬುವಂತಾಗಿದೆ.
ಈ ಹಿನ್ನೆಲೆಯಲ್ಲಿ 'ಕನ್ನಡಪ್ರಭ' ಶಿವಮೊಗ್ಗ ಜಿಲ್ಲೆಯ ಕೆಲ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳ ನೋಟ್ಸ್‌ಗಳ ಛಾಯಾಪ್ರತಿ ಸಂಗ್ರಹಿಸಿದ್ದು, ಮಕ್ಕಳು ಪಠ್ಯ ಪುಸ್ತಕ ಅನುಸರಿಸಿದ್ದರಿಂದಾಗಿ ತಪ್ಪುಗಳನ್ನೇ ಅನುಕರಿಸಿರುವುದು ಗೊತ್ತಾಗಿದೆ. ನೋಟ್ಸ್‌ನಲ್ಲಿ ಆಯ್ದಕ್ಕಿ ಲಕ್ಕಮ್ಮನ ಕುರಿತು ಮಾಹಿತಿ ಬರೆದುಕೊಂಡಿದ್ದಾರೆ, ಪ್ರಶ್ನೋತ್ತರದಲ್ಲೂ ಸಹ ಆಯ್ದಕ್ಕಿ ಲಕ್ಕಮ್ಮನ ಹೆಸರೇ ಪ್ರಸ್ತಾಪವಾಗಿದೆ. (ಆಯ್ದಕ್ಕಿ ಮಾರಯ್ಯನ ವಚನವಾಗಿರುವುದರಿಂದ, ಆತನ ನಾಮಾಂಕಿತ, ಪ್ರಶ್ನೋತ್ತರದಲ್ಲಿರಬೇಕಾಗಿತ್ತು).
ಬರಲಿಲ್ಲ ಸುತ್ತೋಲೆ: ಪಠ್ಯಪುಸ್ತಕದಲ್ಲಿನ ತಪ್ಪುಗಳ ಬಗ್ಗೆ ಈಸೂರು ಶಾಲಾಭಿವೃದ್ಧಿ ಸಮಿತಿಯ ಆರ್. ಜಯಪ್ಪ ಈ ಹಿಂದೆಯೇ ಸರ್ಕಾರದ ಗಮನ ಸೆಳೆದಿದ್ದಾರೆ. ಆದರೆ, ಸರ್ಕಾರ ಈ ವರೆಗೆ ತಿದ್ದುಪಡಿ ಸುತ್ತೋಲೆ ಕಳಿಸಿಲ್ಲ.
ಈ ಕುರಿತಂತೆ ಕನ್ನಡಪ್ರಭ ಜಯಪ್ಪ ಅವರನ್ನು ಮಾತನಾಡಿಸಿದಾಗ, ಈ ರೀತಿ ತಪ್ಪು ಬೋಧನೆಯಿಂದಾಗಿ 5-6 ಲಕ್ಷ ಮಕ್ಕಳು ತಪ್ಪು ಮಾಹಿತಿ ಕಲಿಯುತ್ತಾರೆ. ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಪ್ಪು ಉತ್ತರ ನೀಡಿ ಅಂಕ ಕಳೆದುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಕ್ಕೆ 2-3 ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಹೀಗಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ನೈಜ ವಚನದ ಪ್ರತಿ, ಪಠ್ಯದಲ್ಲಿ ತಪ್ಪಾಗಿರುವ ಮಾಹಿತಿ, ಮಕ್ಕಳು ತಪ್ಪಾಗಿ ಕಲಿತ ಉದಾಹರಣೆ ಸಹಿತ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾಗ್ಯಜ್ಯೋತಿ ಕಡಿತ ವಿರೋಧಿಸಿ ಪ್ರತಿಭಟನೆ
ಸಾಗರ: ಮೆಸ್ಕಾಂ ಅಧಿಕಾರಿಗಳು ತಾಲೂಕಿನ ವಿವಿಧೆಡೆ ಯಾವುದೇ ಮುನ್ಸೂಚನೆ ನೀಡದೇ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದು, ಪುನಃ ಸಂಪರ್ಕ ನೀಡದಿದ್ದಲ್ಲಿ ರೈತ ಸಂಘದಿಂದ ಫೆ.18ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಕೆ. ಗುರುಮೂರ್ತಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾಲೂಕಿನ ನಾಡಕಲಸಿಯಲ್ಲಿ 40 ಮನೆ, ಬಾಳಗೋಡಿನಲ್ಲಿ 25 ಮನೆ, ಕಲಸಿಪೇಟೆಯಲ್ಲಿ 15 ಮನೆ ಹಾಗೂ ಬೇರೆಬೇರೆ ಗ್ರಾಮಗಳಲ್ಲಿನ ಜನರ ಪರವಾಗಿ ಮಾಡಿದ ಅವರು, ಭಾಗ್ಯಜ್ಯೋತಿ ಸಂಪರ್ಕ ಕಡಿತಗೊಳಿಸಿ, ಮೊದಲೇ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತಕುಟುಂಬಗಳ ಮೇಲೆ ಬರೆ ಎಳೆಯುವ ಕೆಲಸವನ್ನು ಇಲಾಖೆ ಮಾಡಿದೆ ಎಂದು ಆರೋಪಿಸಿದರು.
18ರಂದು ಪ್ರತಿಭಟನೆ: ಕಡಿತಗೊಳಿಸಿರುವ ಭಾಗ್ಯಲಕ್ಷ್ಮೀ ವಿದ್ಯುತ್ ಸಂಪರ್ಕವನ್ನು ತಕ್ಷಣ ನೀಡಬೇಕು. ಇಲ್ಲವಾದರೆ ಫೆ. 18ರಂದು ರಾಜ್ಯ ರೈತ ಸಂಘದ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು. ಮಹಾಬಲೇಶ್ವರ ಗೌಡ, ಅಜ್ಜಪ್ಪ, ಉಳ್ಳೂರು ಚಂದ್ರು, ಗಣಪತಿ, ಕೆ.ಎಲ್.ಹುಚ್ಚಪ್ಪ, ರೇಣುಕಮ್ಮ, ಲಲಿತಮ್ಮ, ದುರ್ಗಪ್ಪ, ಚೂಡಾಮಣಿ ಹಾಜರಿದ್ದರು.